ಆಡಳಿತ
ಎಂದರೆ ಸರ್ಕಾರ. ಸರ್ಕಾರದ ಕೆಲಸ ಎರಡು ಬಗೆಯದಾಗಿದೆ. ಒಂದು ನ್ಯಾಯಾಂಗ ರಚನೆ, ಇನ್ನೊಂದು ಆಡಳಿತ ನಿರ್ವಹಣೆ. ಎರಡನೆಯದಕ್ಕೇ ಹೆಚ್ಚು ಪ್ರಾಮುಖ್ಯವಿರುವುದರಿಂದ ಒಂದು ದೇಶದ ಸರ್ಕಾರವನ್ನು ಆಡಳಿತ ಎಂಬ ಮಾತಿನಿಂದಲೇ ಕರೆಯುವ ವಾಡಿಕೆ ಇದೆ. ರಾಜ್ಯಾಂಗ ವಿಧಿನಿಯಮಗಳನ್ನು ಪಾಲಿಸುವ ಯಾವ ರಾಜ್ಯದಲ್ಲೇ ಆಗಲಿ ಆಡಳಿತ ನ್ಯಾಯಾಂಗಕ್ಕನುಸಾರವಾಗಿರಬೇಕಲ್ಲದೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಆಡಳಿತ ವರ್ಗ ಪ್ರಜಾಪ್ರತಿನಿಧಿಗಳಿಗೆ ಜವಾಬ್ದಾರವಾಗಿರಬೇಕು. ಏಕೆಂದರೆ ವ್ಯಕ್ತಿಯಂತೆ ಮಂತ್ರಿಗಳೇ ಆದಿಯಾಗಿ ಅಧಿಕಾರ ವರ್ಗದವರು ದುರಾಡಳಿತಕ್ಕೆ ಒಳಗಾಗುವ ಸಂಭವಗಳಿವೆ.
ಮೊದಲು ರಾಜ್ಯಾಂಗದ ರಚನಾಸಭೆ ವಿಹಿತಮಾಡಿದ ಲಿಖಿತ ನ್ಯಾಯ ಸೂತ್ರಗಳು ರಚಿತವಾಗುತ್ತವೆ; ಈ ಸೂತ್ರಗಳ ಅರ್ಥವಿವರಣೆಗೆ ನ್ಯಾಯಾಂಗವಿದೆ; ಅವುಗಳನ್ನು ಕಾರ್ಯಗತ ಮಾಡಿ ರಾಜ್ಯದ ಪ್ರಗತಿಯನ್ನು ಸಾಧಿಸುವುದು ಆಡಳಿತ ವಿಭಾಗದ ಕೆಲಸ. ಆಡಳಿತ ಒಂದು ಯಂತ್ರದಂತೆ; ಅದರ ಚಾಲಕರು ಆಡಳಿತವರ್ಗ, ಅದೊಂದು ಕ್ರಿಯಾಕ್ಷೇತ್ರ. ಪ್ರಜೆಗಳ ಶಾಂತಿ, ತುಷ್ಟಿ, ಪ್ರಗತಿ ಅದರ ಧ್ಯೇಯ. ಹಿಂದೆ ಎಲ್ಲ ರಾಷ್ಟ್ರಗಳಲ್ಲೂ ರಾಜಪ್ರಭುತ್ವವಿದ್ದಾಗ ಆಡಳಿತಕ್ಕೆ ಹೆಚ್ಚು ಪ್ರಾಮುಖ್ಯ ಇರಲಿಲ್ಲ. ಎಲ್ಲವೂ ಹೆಚ್ಚಾಗಿ ಮಂತ್ರಿಯಿಂದ ಅಥವಾ ಮಂತ್ರಿಗಳಿಂದ ನಿಯಂತ್ರಿತವಾಗುತ್ತಿತ್ತು. ರಾಜ ಅಥವಾ ಮಂತ್ರಿ ಹೇಳಿದ್ದೇ ಶಾಸನವಾಗುತ್ತಿತ್ತು. ಅಧಿಕಾರಿಗಳೆಲ್ಲ ಅವರ ಇಚ್ಛೆಗೆ ಅನುಸಾರವಾಗಿ ನಡೆಯಬೇಕಾಗಿತ್ತು. ಇತ್ತೀಚೆಗೆ ಪ್ರಜಾಪ್ರಭುತ್ವದ ವ್ಯಾಪನೆ ಹೆಚ್ಚುತ್ತಿದೆ; ಆಡಳಿತದ ವಿಷಯವಾಗಿ ತನ್ನ ಸ್ಪಷ್ಟ ಅಭಿಪ್ರಾಯವನ್ನು ತಿಳಿಸುವ ಸ್ವಾತಂತ್ರ್ಯ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ದೊರಕಿದೆ. ಆದ್ದರಿಂದ, ಆಡಳಿತ ಪ್ರಜಾವಿರೋಧವನ್ನು ಕಟ್ಟಿಕೊಳ್ಳದಂತೆ ನಡೆಯಬೇಕು. ಹೀಗೆ ಅದರ ಜವಾಬ್ದಾರಿ ಹೆಚ್ಚಿದೆ. ಆಡಳಿತವನ್ನು ಪ್ರತ್ಯೇಕ ಶಾಸ್ತ್ರವೆಂದೇ ಪರಿಗಣಿಸಿ ಅದರ ಧ್ಯೇಯ, ಸ್ವರೂಪ, ರಚನೆ, ಕಾರ್ಯವಿಧಾನಗಳನ್ನು ನಿರ್ಣಯಿಸುವ ಅಭ್ಯಾಸ ಸುಮಾರು 50-60 ವರ್ಷಗಳಲ್ಲಿ ಹೆಚ್ಚಿದೆ. ಆಡಳಿತಕ್ಕೆ ಸೇರಿದ ಅಧಿಕಾರಿಯೂ ಒಬ್ಬ ಪ್ರಜೆ; ಇತರರಿಗಿರುವಂತೆ ಅವನಿಗೂ ಸಂವಿಧಾನದಲ್ಲೇ ಸ್ಪಷ್ಟಪಡಿಸಿರುವ ಹಕ್ಕುಬಾಧ್ಯತೆಗಳಿವೆ. ಇದು ಮೇಲ್ದರ್ಜೆಯ ಅಧಿಕಾರಿಗೂ ಕೆಳದರ್ಜೆಯವನಿಗೂ ಒಂದೇ ಸಮನಾಗಿ ಅನ್ವಯಿಸುತ್ತದೆ. ಅಧಿಕಾರಿಯನ್ನಾಗಲಿ ಪ್ರಜೆಯನ್ನಾಗಲಿ, ಶಿಕ್ಷಿಸುವುದಾಗಲಿ, ಕೆಲಸದಿಂದ ತೆಗೆದುಹಾಕುವುದಾಗಲಿ, ಈಗ ಏಕಪ್ರಭುತ್ವದ ಕಾಲದಲ್ಲಿದ್ದಷ್ಟು ಸುಲಭಸಾಧ್ಯವಲ್ಲ.

ಒಂದು ದೇಶದ ಆಡಳಿತಯಂತ್ರ ನಡೆಯುವುದು ಸಾರ್ವಜನಿಕ ಹಣದಿಂದ. ಆ ಹಣ ಸದ್ವಿನಿಯೋಗವಾಗಬೇಕು: ಅಂದರೆ ಆಡಳಿತವರ್ಗದವರ ಕಾರ್ಯಗಳಿಂದ ಪ್ರಜೆಗಳ ಹಿತ ಸಾಧಿಸಲ್ಪಡಬೇಕು. ಆದ್ದರಿಂದ ಆಡಳಿತದ ಅನೇಕ ಶಾಖೆಗಳನ್ನು ರಚಿಸುವಾಗ, ಅವುಗಳ ಕಾರ್ಯವಿಧಾನ ಕ್ರಮಗಳನ್ನು ನಿಯಂತ್ರಿಸುವಾಗ, ಕೊಂಚವೂ ಸಾರ್ವಜನಿಕ ಹಣ ಪೋಲಾಗದಂತೆ ನೋಡಿಕೊಳ್ಳುವುದು ಅಗತ್ಯ. ಕನಿಷ್ಠಮೊತ್ತದ ವ್ಯಯದಿಂದ ಅತ್ಯಂತ ಫಲಕಾರಿಕಾರ್ಯ ನಡೆಯುವಂತಾಗಬೇಕು. ಆಡಳಿತದ ಕಾರ್ಯಸಮರ್ಥತೆ ಕಂಡುಬರುವುದು ಇದರಲ್ಲಿ.

ಆಡಳಿತ ಇಡೀ ರಾಷ್ಟ್ರದ ಹಿತಕ್ಕೆ ಸಂಬಂಧಿಸಿದ್ದಾದುದರಿಂದ ಅದರ ಕಾರ್ಯವ್ಯಾಪ್ತಿ ವಿಶಾಲವಾಗಿದೆ; ಜನಜೀವನದ ಎಲ್ಲ ಮುಖಗಳಿಗೂ ಸಂಬಂಧಿಸಿದೆ. ಆದ್ದರಿಂದ ಅದನ್ನು ಅನೇಕ ಇಲಾಖೆಗಳಾಗಿ ವಿಂಗಡಿಸಿದ್ದಾರೆ. ಪ್ರತಿಯೊಂದು ಇಲಾಖೆಗೂ ಒಬ್ಬ ಮುಖ್ಯಾಧಿಕಾರಿ; ಆ ಇಲಾಖೆಯ ಕಾರ್ಯಕಲಾಪಗಳನ್ನು ನಿಯಂತ್ರಿಸುವವ ಆತ; ಅವನೇ ಅದರ ಆಗುಹೋಗುಗಳಿಗೆ ಜವಾಬ್ದಾರ. ಅವನ ಅಧೀನದಲ್ಲಿ ನಾನಾ ಮಟ್ಟದ ಅಧಿಕಾರಿಗಳ ಕ್ರಮಬದ್ಧ ಶ್ರೇಣಿಯಿದೆ. ಇವರೆಲ್ಲರಿಗೂ ಅವರವರ ಕಾರ್ಯಗಳನ್ನು ನಿಗದಿಪಡಿಸುತ್ತಾರೆ. ಇವರಲ್ಲಿ ಪ್ರತಿಯೊಬ್ಬನೂ ತನಗೆ ಒಪ್ಪಿಸಿದ ಕಾರ್ಯವನ್ನು ನಿರ್ದಿಷ್ಟಪಡಿಸಿದ ಕಾಲದಲ್ಲಿ ಮಾಡಿ ಮುಗಿಸಬೇಕು. ಹಾಗಿಲ್ಲದಿದ್ದರೆ ಆ ಕಾರ್ಯಕ್ಕೆ ಸಂಬಂಧಿಸಿದ ಇತರ ಶ್ರೇಣಿಗಳಲ್ಲೂ ಕೆಲಸ ಸ್ಥಗಿತವಾಗುತ್ತದೆ. ಆದ್ದರಿಂದ ಅಧಿಕಾರಿಗಳಿಗೆ ಕಾರ್ಯಗಳನ್ನು ಹಂಚುವುದರಲ್ಲಿ, ಅವುಗಳ ನಿರ್ವಹಣೆಯಲ್ಲಿ ಸರಿಯಾದ ಸಂಘಟನೆ ಹೊಂದಿಕೆ ಇರಬೇಕಾದದ್ದು ಅತ್ಯವಶ್ಯಕ. ಹೀಗೆಯೇ ಇಲಾಖೆಗಳಲ್ಲೂ ಪರಸ್ಪರ ಹೊಂದಿಕೆಯಿರಬೇಕು; ಏಕೆಂದರೆ ಒಂದು ವಿಷಯ ಅನೇಕ ಇಲಾಖೆಗಳ ಕಾರ್ಯವ್ಯಾಪ್ತಿಗೆ ಒಳಪಟ್ಟಿರಬಹುದು. ಇದಕ್ಕಾಗಿಯೇ ಅನೇಕ ವೇಳೆ ಸರಕಾರವೇ ಎಲ್ಲ ಇಲಾಖೆಗಳ ಉನ್ನತಾಧಿಕಾರಿಗಳ ಸಮ್ಮೇಳನಗಳನ್ನು ಏರ್ಪಡಿಸಿ ಅವುಗಳ ಪರಸ್ಪರ ಸಂಬಂಧ, ಹೊಂದಿಕೆ ಸರಿಯಾಗಿದೆಯೇ ಇಲ್ಲವೆ ಎಂಬುದನ್ನು ವಿಮರ್ಶಿಸುತ್ತದೆ.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗದ ಪ್ರಾಮುಖ್ಯ ಹೆಚ್ಚು; ಕಾರ್ಯಾಂಗ ಅದಕ್ಕೆ ಅಧೀನವಾಗಿ ಕೆಲಸ ಮಾಡಬೇಕಾಗುತ್ತದೆ. ಆಡಳಿತಯಂತ್ರ ಸರಾಗವಾಗಿ ನಡೆಯಬೇಕಾದರೆ, ಆಡಳಿತದಲ್ಲಿ ಇತರರ ಕೈವಾಡ ಇರಬಾರದು.

(ನೋಡಿ- ಆಡಳಿತನಿರ್ವಹಣೆ)
(ನೋಡಿ- ಸಾರ್ವಜನಿಕ-ಆಡಳಿತ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ